ತ್ಯೂಚೆಫ್, ಫ್ಯೊದರ್ ಇವ್ಯಾನವ್ಯಿಚ್
	(1803-1873). ರಷ್ಯದ ಪ್ರಸಿದ್ಧ ಕವಿ. ಪುಷ್ಕಿನ್ನನ ಸಮಕಾಲೀನ. ಭಾವಗೀತೆಗಳ ರಚನೆಯಲ್ಲಿ ಪುಷ್ಕಿನ್ನನಿಗೆ ಮೊದಲ ಸ್ಥಾನವಾದರೆ ಈತನಿಗೆ ಎರಡನೆಯ ಸ್ಥಾನ. ಈತ ಸಂಪ್ರದಾಯ ವರ್ಗಕ್ಕೆ ಸೇರಿದ ನೊಬೆಲ್ಲರ ಮನೆತನಕ್ಕೆ ಸೇರಿದವ. ತನ್ನ ವಿದ್ಯಾರ್ಥಿ ದೆಸೆಯಲ್ಲಿಯೇ ಕವಿತೆಗಳನ್ನು ರಚಿಸತೊಡಗಿದ, ಮಾಸ್ಕೊ ವಿಶ್ವವಿದ್ಯಾನಿಲಯದ ಸ್ಲಾವ್ ಭಾಷೆಗಳ ವಿಭಾಗದಲ್ಲಿ ಅಧ್ಯಯನವನ್ನು ಕೈಗೊಂಡು ಪದವಿಯನ್ನು ಪಡೆದ. ಬವಾರ್ ರಾಜ್ಯದ ರಾಜಧಾನಿಯಾಗಿದ್ದ ಮುನ್ಷೆನ್‍ನಲ್ಲಿ (ಮ್ಯುನಿಕ್) ರಾಯಭಾರಿಯಾಗಿದ್ದ. ಒಟ್ಟು 22 ವರ್ಷಗಳ ಕಾಲ ಈತನ ವಿದೇಶದಲ್ಲಿದ್ದ. ಪ್ರಸಿದ್ಧ ಜರ್ಮನ್ ಕವಿಗಳಾಗಿದ್ದ ಪೆಲಿಂಗಂ ಮತ್ತು ಹೈನೆ ಅವರು ಈತನ ಬಗ್ಗೆ ತುಂಬ ಗೌರವ ಭಾವನೆ ಹೊಂದಿದ್ದರು. ಪ್ರತೀಕ ಸಾಹಿತ್ಯದ ಮುನ್ಸೂಚಕನಾದ ಈತನಲ್ಲಿ ಸ್ಲವೊಫಿಲ್ ಮನೋಧರ್ಮ ಕಾಣಿಸುತ್ತದೆ. ಈತನಿಗೆ ಜನಪ್ರಿಯತೆ ಬಂದುದು ಬಹಳ ತಡವಾಗಿ. ಈತನದು ತಾತ್ತ್ವಿಕ ಕಾವ್ಯ. ವಿಶ್ವದೇವೈಕ್ಯ ದೃಷ್ಟಿ. ಪ್ರಾಚೀನ ಸಾಹಿತ್ಯದ ನಿಷ್ಠಸಂಯಮವನ್ನು ಈತನ ಕಾವ್ಯಗಳಲ್ಲಿ ಕಾಣಬಹುದು. ಈತನ ಜೀವನದಲ್ಲಿ ತಡವಾಗಿ ಬಂದ ದುರಂತ ಪ್ರೇಮಾನುಭವವೊಂದು ಈತನಿಂದ ಉತ್ತಮ ಪ್ರಣಯಗೀತೆಗಳನ್ನು ಬರೆಸಿತು. ಈತನ ನಿಸರ್ಗ ಕವನಗಳು, ಪ್ರೇಮಗೀತಗಳು ಸುಂದರವಾದುವು, ಈತನ ಕೃತಿಗಳಲ್ಲಿ ಮುಸುಕಿರುವ ನಿರಾಶವಾದ ಅವ್ಯವಸ್ಥೆಗೂ ಸೃಷ್ಟಿಗೂ ನಡೆಯುವ ನಿರಂತರ ಹೋರಾಟದ ದರ್ಶನದಿಂದ ಉದ್ಭವವಾದುದು. ನಿಸರ್ಗಗೀತಗಳಲ್ಲಿ ಅಂತರಾರ್ಥವುಳ್ಳ ಪ್ರತಿಮೆಗಳನ್ನು ಈತ ಯಶಸ್ವಿಯಾಗಿ ಬಳಸುತ್ತಾರೆ. ಈತನ ಶೈಲಿ ಆರ್ಷೇಯವಾದುದು. ಇದರಲ್ಲಿ ಡೈಯರ್‍ಝಾವ್ಯಿನ್ ಮತ್ತು ಲಮಾನಾಸಾಫ್‍ರ ಪ್ರಭಾವದ ಸೂಚನೆಯುಂಟು. ಈತನ ಅನೇಕ ಗೀತೆಗಳನ್ನು ಸಂಗೀತಕ್ಕೆ ಅಳವಡಿಸಿಕೊಳ್ಳಲಾಗಿದೆ. 1854ರಲ್ಲಿ ಈತನ ಕವನಸಂಗ್ರಹವೊಂದು ಪ್ರಕಟವಾಯಿತು. ಅದರ ಅನೇಕ ಕವನಗಳು ನೇಚರ್, ಸ್ಪ್ರಿಂಗ್, ಆನ್ ಆಟಮ್ ಈವಿನಿಂಗ್ಸ್, ದಿ ಡೆಸರ್ಟೆಡ್ ವಿಲ, ದಿ ಲಾಸ್ಟ್ ಲವ್ ಎಂಬ ಹೆಸರಿನಲ್ಲಿ ಇಂಗ್ಲಿಷ್ ಭಾಷೆಗೆ ಅನುವಾದವಾಗಿವೆ.
(ಎಲ್.ಎಸ್.ಎಸ್.; ಎಚ್.ಎಸ್.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ